ಭಾಷೆ
ಕನ್ನಡ ಮತ್ತು ಕೊಂಕಣಿ

ಕೊಂಕಣಿಯು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಬಳಸಲಾಗುವ ಪ್ರಮುಖವಾದ ಭಾಷೆ. ಕೊಂಕಣಿ ಭಾಷಿಕರು ಭಾರತದ ಇತರ ಭಾಗಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಕೊಂಕಣಿಯು ಇಂಡೋ ಆರ್ಯನ್ ವರ್ಗಕ್ಕೆ ಸೇರಿದ ಭಾಷೆ. ದ್ರಾವಿಡ ಭಾಷೆಯಾದ ಕನ್ನಡದೊಂದಿಗೆ ಅದಕ್ಕೆ ಇರುವ ಸಂಬಂಧವು ಐತಿಹಾಸಿಕ ಕಾರಣಗಳಿಂದ ಮೂಡಿಬಂದಿದೆ. ವಿದ್ವಾಂಸರ ಪ್ರಕಾರ ಕೊಂಕಣಿಯು ಶೌರಸೇನೀ ಪ್ರಾಕೃತ, ಬಂಗಾಳೀ ಮತ್ತು ಅಸ್ಸಾಮೀ ಭಾಷೆಗಳಿಂದ ವಿಕಸನಗೊಂಡಿದೆ. ಕೊಂಕಣಿ ಮಾತನಾಡುವ ಸಮುದಾಯಗಳು ಉತ್ತರ ಭಾರತದಿಂದ ಗೋವಾಕ್ಕೆ ವಲಸೆ ಬಂದಿರಬೇಕು. ಈ ವಲಸೆಯು ನಡೆದಾಗ ಗೋವಾದಲ್ಲಿ ಕರ್ನಾಟಕದ ಕದಂಬ ರಾಜವಂಶದ ದೊರೆಗಳು ರಾಜ್ಯಭಾರ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಕನ್ನಡ ಮತ್ತು ಕೊಂಕಣಿಗಳ ನಡುವೆ ಒಂದು ಪ್ರಮಾಣದ ಸಂಬಂಧವು ಉಂಟಾಯಿತು. ಒಂದು ಹಂತದಲ್ಲಿ, ಕೊಂಕಣಿ ಭಾಷಿಕರು ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಭಾರೀ ಪ್ರಮಾಣದಲ್ಲಿ ವಲಸೆ ಬರಬೇಕಾಯಿತು. ಹದಿನಾರು ಮತ್ತು ಹದಿನೇಳನೆಯ ಶತಮಾನಗಳಲ್ಲಿ ಪೋರ್ಚುಗೀಸ್ ಪ್ರಭುತ್ವವು ನಡೆಸಿರಬಹುದಾದ ಹಿಂಸೆಯೂ ಈ ವಲಸೆಗೆ ಕಾರಣವಾಗಿರಬಹುದು. ಹೀಗೆ ಬಂದವರಲ್ಲಿ ಬಹುಪಾಲು ಜನರು ವ್ಯಾಪಾರಿಗಳು, ಕಲಾವಿದರು ಮತ್ತು ಕುಶಲಕರ್ಮಿಗಳು. ಈ ವಲಸೆಗಾರರು ಹಿಂದೂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದು ಈ ಸಂಗತಿಯೂ ಅವರ ಭಾಷಿಕ ಅಭ್ಯಾಸಗಳ ಮೇಲೆ ಪರಿಣಾಮ ಬೀರಿರಬಹುದು. ಭಾರತದ ಬೇರೆ ಬೇರೆ ಕಡೆ ಬಳಕೆಯಾಗುವುದರಿಂದ ಕೊಂಕಣಿಗೆ ಅನೇಕ ಉಪಭಾಷೆಗಳಿವೆ.ಪ್ರತಿಯೊಂದು ಉಪಭಾಷೆಯೂ ತನ್ನ ಭೌಗೋಳಿಕ ಪರಿಸರದಿಂದ ರೂಪಿತವಾಗಿದೆ. ಕರ್ನಾಟಕದಲ್ಲಿಯೂ ಕೂಡ ವಿಭಿನ್ನ ಭಾಗಗಳಲ್ಲಿ ಬಳಸುವ ಕೊಂಕಣಿಗಳ ನಡುವೆ ಸೂಕ್ಷ್ಮವಾದ ವ್ಯತ್ಯಾಸಗಳಿವೆ. ಡಾ. ಕೃಷ್ಣಾನಂದ ಕಾಮತ್ ಅವರು ಹೇಳಿರುವಂತೆ ಕಾರವಾರ ಮತ್ತು ಅಂಕೋಲಾಗಳಲ್ಲಿ ಅವರು ಉಚ್ಚಾರಾಂಶಗಳ ಮೇಲೆ ಒತ್ತು ಕೊಟ್ಟರೆ, ಕುಮಟಾ ಹಾಗೂ ಹೊನ್ನಾವರಗಳಲ್ಲಿ ವ್ಯಂಜನಗಳ ಬಳಕೆಯು ವಿಪುಲವಾಗಿದೆ. ಭಟ್ಕಳದ ನವಾಯಿತರ ಕೊಂಕಣಿಯಲ್ಲಿ ಅನೇಕ ಪರ್ಶಿಯನ್ ಪದಗಳು ಸೇರಿಕೊಂಡು ಆ ಭಾಷೆಯು ಹೆಚ್ಚು ಮಂಜುಳವೆನ್ನಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಂಕಣೀಗಳು ಕನ್ನಡ ಮತ್ತು ಕೊಂಕಣಿ ಭಾಷೆಯ ನಾಮಪದಗಳ ನಡುವೆ ಅಷ್ಟೊಂದು ಭೇಧಭಾವ ಮಾಡದೆ, ಎರಡನ್ನೂ ಬಳಸುತ್ತಾರೆ. ಅವರು ಹೆಚ್ಚು ವ್ಯಾವಾಹಾರಿಕವೂ ಸರಳವೂ ಆದ ಭಾಷೆಯನ್ನು ರೂಢಿಸಿಕೊಂಡಿದ್ದಾರೆ. ಕೆಲವು ಬಾರಿ ಅವರ ಕೊಂಕಣಿಗೆ ತುಳು ಭಾಷೆಯ ಪದಗಳೂ ಸೇರಿಕೊಳ್ಳುತ್ತವೆ.(ಕಾಮತ್ ಅವರ ವೆಬ್ ಸೈಟ್) ಕೊಂಕಣಿಯನ್ನು ವಿಭಿನ್ನ ವರ್ಗಗಳಿಗೆ ಸೇರಿದ ಸೋನಾರ, ಸೇರೆಗಾರ, ಮೇಸ್ತ್ರಿ, ಸುತಾರ್, ಖಾರ್ವಿ, ಸಮಗಾರ್, ನವಾಯತಿ ಮುಂತಾಧ ಸಮುದಾಯಗಳು ಬಳಸುವುದರಿಂದ ಅದರಲ್ಲಿ ಅನೇಕ ಸಾಮಾಜಿಕ ಉಪಭಾಷೆಗಳೂ ಇರಬಹುದು.

ಕೊಂಕಣಿಗೆ ತನ್ನದೇ ಆದ ಲಿಪಿಯಿಲ್ಲ. ಆ ಭಾಷಿಕರು ತಮ್ಮ ವಾಸಸ್ಥಳವನ್ನು ಅವಲಂಬಿಸಿ, ದೇವನಾಗರಿ ಅಥವಾ ಕನ್ನಡ ಲಿಪಿಯನ್ನು ಬಳಸುತ್ತಾರೆ. ಕರ್ನಾಟಕದ ಹಲವು ಭಾಗಗಳಲ್ಲಿ ಧರ್ಮಗ್ರಂಥಗಳು, ನಿಯತಕಾಲಿಕಗಳು, ಪುಸ್ತಕಗಳು ಹಾಗೂ ಲೆಕ್ಕ ಪತ್ರಗಳನ್ನು ಕನ್ನಡ ಲಿಪಿಯಲ್ಲಿಯೇ ಬರೆಯಲಾಗುತ್ತದೆ. ಕೊಂಕಣಿಯನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಬಹುಪಾಲು ಜನರು ದ್ವಿಭಾಷಿಕರು. ಕನ್ನಡದ ಮೇಲೆ ಅವರಿಗೆ ಇರುವ ಪ್ರಭುತ್ವವು ಪ್ರಶಂಸನೀಯವಾದುದು. ಆದರೆ, ಕನ್ನಡ ಭಾಷಿಕರಿಗೆ ಕೊಂಕಣಿಯ ಅರಿವು ಇರುವುದು ಅಪರೂಪ. ಆದ್ದರಿಂದ ಇದನ್ನು ಏಕಮುಖಿಯಾದ ದ್ವಿಭಾಷಿಕತೆಯೆಂದು ಕರೆಯಬಹುದು. ವಾಸ್ತವವಾಗಿ, ಅನೇಕ ಕೊಂಕಣಿ ಭಾಷಿಕರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಪಂಜೆ ಮಂಗೇಶರಾವ್, ಎಂ.ಎನ್. ಕಾಮತ್, ಎಂ. ಗೋವಿಂದ ಪೈ, ದಿನಕರ ದೇಸಾಯಿ, ಗಂಗಾಧರ ಚಿತ್ತಾಲ, ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ನಾ. ಡಿಸೋಜ, ಜಯಂತ ಕಾಯ್ಕಿಣಿ ಮುಂತಾಧವರು ಅವರಲ್ಲಿ ಕೆಲವರು. ಕ್ರಿಶ್ಚಿಯನ್ ಸಮುದಾಯಗಳು ಮಾತನಾಡುವ ಕೊಂಕಣಿಗೂ ಇತರರು ಬಳಸುವ ಕೊಂಕಣಿಗೂ ಕೊಂಚ ವ್ಯತ್ಯಾಸವಿದೆ.

ಈ ಎರಡು ಸಮುದಾಯಗಳ ನಡುವಿನ ಸತತವಾದ ಕೊಳುಕೊಡೆಯು ಅಬಹು ಮಟ್ಟಿಗೆ ಏಕಮುಖವಾದ ಹಲವು ಪ್ರಭಾವಗಳಿಗೆ ಎಡೆ ಮಾಡಿಕೊಟ್ಟಿದೆ. ಪದರಚನೆ, ವಾಕ್ಯರಚನೆ ಮತ್ತು ಶಬ್ದಕೋಶದ ನೆಲೆಗಳಲ್ಲಿ ಕನ್ನಡವು ಕೊಂಕಣಿಯ ಮೇಲೆ ಪರಿಣಾಮ ಬೀರಿದೆ. ಹಾಗೆಯೇ ಗಾದೆಗಳು. ವಾಗ್ರೂಢಿಗಳು ಮುಂತಾದ ದೊಡ್ಡ ಘಟಕಗಳು ಕೂಡ ಕೊಂಕಣಿಗೆ ಎರವಲಾಗಿ ಹೋಗಿವೆ. ಕರ್ನಾಟಕದ ಗೌಡ ಸಾರಸ್ವತ ಬ್ರಾಹ್ಮಣರು ಸರಿಯೆಂದು ಒಪ್ಪಿಕೊಳ್ಳುವ ಅನೇಕ ವಾಕ್ಯಗಳನ್ನು ಮಹಾರಾಷ್ಟ್ರದಲ್ಲಿರುವವರು ಸ್ವೀಕರಿಸುವುದಿಲ್ಲ. ಏಕೆಂದರೆ, ಅವರ ಭಾಷೆಯ ಮೇಲೆ ಕನ್ನಡದ ಪ್ರಭಾವವಿಲ್ಲ. ಈ ಸಂಗತಿಯನ್ನು ನಾಡಕರಣಿ, ತಾನ್ಯಾ ಕುಟೇವಾ, ಬರ್ನ್ಡ್ ಹೀನ್ ಮುಂತಾದ ವಿದ್ವಾಂಸರು ತಮ್ಮ ಲೇಖನಗಳಲ್ಲಿ ತೋರಿಸಿಕೊಟ್ಟಿದ್ದಾರೆ.

ಅನೇಕ ಕನ್ನಡ ಗಾದೆಗಳನ್ನು ಕೊಂಕಣಿಯು ಇಡಿಯಾಗಿ ಅಥವಾ ಆಂಶಿಕವಾಗಿ ಸ್ವೀಕರಿಸಿದೆ. ಹಾಗೆಯೇ ದುಡ್ಡು, ನತ್ತು, ಬಾವಲಿ, ಬಾಗಿಲು ಮುಂತಾದ ಪದಗಳು ಮೂಲ ಕೊಂಕಣಿ ಪದಗಳನ್ನು ಬದಿಗೆ ಸರಿಸಿ, ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿವೆ. ಕೊಂಕಣಿ ವ್ಯಾಕರಣದ ಮೇಲೆ ಕನ್ನಡ ವ್ಯಾಕರಣವು ಬೀರಿರುವ ಪ್ರಭಾವವನ್ನು ಈ ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ.

  1. ಕೊಂಕಣಿಗೆ ಸಹಜವಾದ ದೀರ್ಘ ಸ್ವರಗಳ ಬದಲಾಗಿ, ಹ್ರಸ್ವಸ್ವರಗಳಾದ ಮತ್ತು ಗಳನ್ನು ಬಳಸುವುದು.
  2. ವ್ಯಂಜನದಿಂದ ಪದಗಳ ಕೊನೆಯಲ್ಲಿ ಸ್ವರವು ಸೇರಿಕೊಳ್ಳುವುದು.
  3. ಕೆಲವು ವಿಭಕ್ತಿ ಪ್ರತ್ಯಯಗಳು ತಮ್ಮ ಇಂಡೋ ಮೂಲ ರೂಪಗಳಿಗಿಂತ ಹೆಚ್ಚಾಗಿ ಕನ್ನಡ ಪ್ರತ್ಯಯಗಳನ್ನೇ ಹೋಲುವುದು

ಈ ಅಂಶಗಳನ್ನು ಗಮನಿಸಿದಾಗಲೂ ಕೊಂಕಣಿಯು ದ್ರಾವಿಡಭಾಷೆಯಲ್ಲವೆಂಬ ಮಾತು ಹುಸಿಯಾಗುವುದಿಲ್ಲ. ಕರ್ನಾಟಕ ಸರ್ಕಾರವು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗಳ ಅಭಿವೃದ್ಧಿಗಾಗಿ ಪ್ರತ್ಯೇಕವಾದ ಕೊಂಕಣಿ ಅಕಾಡೆಮಿಯನ್ನು ಸ್ಥಾಪಿಸಿದೆ. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ ಮುಂತಾದವರು ಕೊಂಕಣಿಗೆ ಸಹಜವಾದ ಅನೇಕ ಪದಗಳು ಮತ್ತು ಪದಪುಂಜಗಳನ್ನು ಕನ್ನಡ ಸಾಹಿತ್ಯಕೃತಿಗಳಲ್ಲಿ ಬಳಸಿರುವುದು ಕುತೂಹಲಕಾರಿಯಾದ ಸಂಗತಿ. ಕೆಲವು ಸಲ ಅವರ ಕಥೆ, ಕಾದಂಬರಿಗಳಲ್ಲಿ ಬರುವ ವಾಕ್ಯವಿನ್ಯಾಸಗಳೂ ಕೊಂಕಣಿ ಮೂಲವನ್ನು ಹೊಂದಿರುತ್ತವೆ.

ಹೀಗೆ ಕನ್ನಡ ಮತ್ತು ಕೊಂಕಣಿಗಳ ಸಂಬಂಧವು ಪರಸ್ಪರ ಪ್ರೀತಿ ಗೌರವಗಳನ್ನು ಅವಲಂಬಿಸಿದೆ. ಅಲ್ಲಿ ಭಾಷಿಕ ಮೂಲಭೂತವಾದದ ಸುಳಿವೂ ಇಲ್ಲ.

 

ಮುಂದಿನ ಓದು:

  1. A History of Konkani Literature: From 1500 to 1992, Manohararaya Sardesai, Sahitya Academy, 2000
  2. The Christian Konkani of South Kanara: A Linguistic Analysis, W. Madtha, 1984, Karnataka University, Dharwar
  3. Literary Konkani: A brief History, J. Pereira, 1973, Konkani Sahitya Prakashan
  4. The Konkani Language: Historival and Linguistic Perspectives, V. Nityananda Bhat, ElA Sunita and Sukruteendra, 2004, Oriental Research Institute
  5. ಕೊಂಕಣಿ ಭಾಷೆಯ ಉಗಮ ಮತ್ತು ಬೆಳವಣಿಗೆ, ಕೃಷ್ಣಾನಂದ ಕಾಮತ್, (ಕಾಮತ್ಸ್ ಪಾಟ್ ಪೌರಿ ಎಂಬ ವೆಬ್ ಸೈಟ್ ನಲ್ಲಿ ದೊರೆಯುತ್ತದೆ.)

 

ವಿದ್ಯುನ್ಮಾನ ಸಂಪರ್ಕಗಳು:

  1. Language Contact and Grammatical Change‎ - Page 95 (Kannada and Konkani) (Bernd Heine and Tania Kuteva, Cambridge University Press, 2005)
  2. Essays on Konkani Language and Literature: Professor Armando (Prof Armando Menezes)
  3. Kamat's Potpourri -- The History, Mystery, and Diversity of India

ಮುಖಪುಟ / ಭಾಷೆ